ಕಾಮನ್‍ವೆಲ್ತ್ ಕ್ರೀಡೆಗಳು

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಒಲಿಂಪಿಕ್ ಕ್ರೀಡೆಗಳನ್ನು ಬಿಟ್ಟರೆ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರೀಡಾಕೂಟ (ಕಾಮನ್‍ವೆಲ್ತ್ ಗೇಮ್ಸ್). ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಕತ್ತಿವರಿಸೆ, ಈಜು, ಬೋಲ್ಸ್, ಮುಷ್ಟಿಕಾಳಗ, ಸೈಕಲ್ ಸವಾರಿ, ಹುಟ್ಟುದೋಣಿಯ ಚಾಲನೆ. (ರೋಯಿಂಗ್), ಭಾರ ಎತ್ತುಗೆ, ಕುಸ್ತಿ-ಇವುಗಳಲ್ಲಿ ಪಂದ್ಯಗಳನ್ನೇರ್ಪಡಿಸಲಾಗುತ್ತದೆ. ಮೊದಲನೆಯ ಎರಡಕ್ಕೆ ಸ್ತ್ರೀಯರೂ ಪ್ರವೇಶಿಸಬಹುದು. ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹವ್ಯಾಸಿಗಳಾಗಿರಬೇಕು; ಕಾಮನ್‍ವೆಲ್ತ್ ಕೂಟದ ಯಾವುದಾದರೂ ಸದಸ್ಯರಾಷ್ಟ್ರದಲ್ಲಿ ಹುಟ್ಟಿದವರಾಗಿರಬೇಕು ಅಥವಾ ಅದರ ನಿವಾಸಿಗಳಾಗಿರಬೇಕು. 

 ಮೊದಲು ಇದಕ್ಕೆ ಬ್ರಿಟಿಷ್ ಸಾಮ್ರಾಜ್ಯ ಮತ್ತು ಕಾಮನ್‍ವೆಲ್ತ್ ಕ್ರೀಡೆಗಳು ಎಂಬ ಹೆಸರಿತ್ತು. ಇಂಥ ಕೂಟವನ್ನು ಏರ್ಪಡಿಸುವ ವಿಚಾರ ಮೊಟ್ಟಮೊದಲಿಗೆ ಬಂದದ್ದು 1891ರಲ್ಲಿ-ರೆವರೆಂಡ್ ಆಸ್ಟ್‍ಲಿ ಕೂಪರನಿಂದ. ಸಾಮ್ರಾಜ್ಯ ಕ್ರೀಡೆಗಳನ್ನು ಏರ್ಪಡಿಸಬೇಕೆಂದು ಆಸ್ಟ್ರೇಲಿಯದ ಅಮೆಚೂರ್ ಅಥ್ಲೆಟಿಕ್ ಯೂನಿಯನಿನ ರಿಚರ್ಡ್ ಕೂಂ ತೀವ್ರವಾಗಿ ಪ್ರಚಾರ ಮಾಡಿದ. 5ನೆಯ ಜಾರ್ಜ್ ದೊರೆಯ ಪಟ್ಟಾಭಿಷೇಕೋತ್ಸವದ ಅಂಗವಾಗಿ 1911ರಲ್ಲಿ ಲಂಡನಿನಲ್ಲಿ ಸಣ್ಣ ಪ್ರಮಾಣದಲ್ಲಿ ಅಂತರ ಸಾಮ್ರಾಜ್ಯ ಕ್ರೀಡೆಗಳು ನಡೆದುವು. ಇದರಲ್ಲಿ ಭಾಗವಹಿಸಿದ್ದವರು ನಾಲ್ಕು ದೇಶಗಳ ಕ್ರೀಡಾಪಟುಗಳು ಮಾತ್ರ: ಇಂಗ್ಲೆಂಡ್, ಕೆನಡ, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕದವರು. ಈಜು, ಕುಸ್ತಿ ಮತ್ತು ಮುಷ್ಟಿಕಾಳಗಗಳಲ್ಲಿ ಒಟ್ಟು ಐದು ಸ್ಪರ್ಧೆಗಳು ಮಾತ್ರ ನಡೆದುವು.

 ಅಧಿಕೃತವಾಗಿ ಮೊಟ್ಟಮೊದಲಿನ ಕ್ರೀಡಾಕೂಟವನ್ನು ಏರ್ಪಡಿಸಲಾದ್ದು 1930ರಲ್ಲಿ - ಕೆನಡದ ಹ್ಯಾಮಿಲ್ಟನ್ ನಗರದಲ್ಲಿ. ಬ್ರಿಟಿಷ್ ಚಕ್ರಾಧಿಪತ್ಯ ಕ್ರೀಡೆಗಳು-ಎಂಬುದು ಅದರ ಅಧಿಕೃತ ನಾಮಧೇಯ. ಹನ್ನೊಂದು ರಾಷ್ಟ್ರಗಳ ತಂಡಗಳು ಭಾಗವಹಿಸಿದ್ದ ಆ ಕೂಟ ತುಂಬ ಯಶಸ್ವಿಯಾಯಿತು. ಇಂಥ ಕ್ರೀಡಾಕೂಟವನ್ನು ನಾಲ್ಕು ವರ್ಷಗಳಿಗೊಮ್ಮೆ-ಎರಡು ಒಲಿಂಪಿಕ್ ಕೂಟಗಳ ನಡುವೆ-ಏರ್ಪಡಿಸಬೇಕೆಂಬ ತೀಮಾನವಾದ್ದು ಆ ಸಂದರ್ಭದಲ್ಲೇ.

 ಎರಡನೆಯ ಕಾಮನ್‍ವೆಲ್ತ್ ಕ್ರೀಡಾಕೂಟ ಲಂಡನಿನಲ್ಲಿ 1934ರಲ್ಲಿ ಜರುಗಿದಾಗ ಸುಮಾರು 50,000 ಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ಅದನ್ನು ವೀಕ್ಷಿಸಿದರು. ಸ್ತ್ರೀಯರೂ ಭಾಗವಹಿಸಬಹುದಾದ ಸ್ಪರ್ಧೆಗಳ ಸಂಖ್ಯೆ ಹೆಚ್ಚಿತು. ಭಾರತ, ಹಾಂಗ್‍ಕಾಂಗ್, ಜಮೈಕ, ದಕ್ಷಿಣ ರೊಡೀಷಿಂiÀi ಮತ್ತು ಟ್ರಿನಿಡಾಡ್ - ಇವು ಈ ಕ್ರೀಡೆಯಲ್ಲಿ ಭಾಗವಹಿಸಿದ ಹೊಸ ರಾಷ್ಟ್ರಗಳು. ಒಟ್ಟು ಕ್ರೀಡಾಪಟುಗಳ ಸಂಖ್ಯೆ 600.

 ಆಸ್ಟ್ರೇಲಿಯದ 150ನೆಯ ವಾರ್ಷಿಕೋತ್ಸವದ ಸವಿನೆನಪಾಗಿ ಮೂರನೆಯ ಕಾಮನ್‍ವೆಲ್ತ್ ಕ್ರೀಡೆಗಳು 1938ರಲ್ಲಿ ಸಿಡ್ನಿಯಲ್ಲಿ ಜರುಗಿದಾಗ ಸುಮಾರು 507ಸ್ಪರ್ಧಿಗಳು ಭಾಗವಹಿಸಿದ್ದರು.

 ಎರಡನೆಯ ಮಹಾಯುದ್ಧದ ಪರಿಣಾಮವಾಗಿ 1942 ಮತ್ತು 1946ರಲ್ಲಿ ಕ್ರೀಡೆಗಳು ಜರುಗಲಿಲ್ಲ. 1950ರಲ್ಲಿ ನ್ಯೂಜೀóಲೆಂಡ್ ರಾಷ್ಟ್ರದ ಆಕ್ಲೆಂಡ್ನಲ್ಲಿ ನಡೆದ 4ನೆಯ ಕೂಟದಲ್ಲಿ 12 ರಾಷ್ಟ್ರಗಳ ಪರವಾಗಿ 663 ಸ್ಪರ್ಧಿಗಳು ಭಾಗವಹಿಸಿದ್ದರು.

 ಅಥ್ಲೆಟಿಕ್ ಕ್ರೀಡೆಗಳ ಇತಿಹಾಸದಲ್ಲಿಯೇ ಮೊಟ್ಟಮೊದಲನೆಯ ಬಾರಿಗೆ ಒಂದು ಮೈಲಿ ದೂರವನ್ನು 4 ನಿಮಿಷಗಳ ಒಳಗೆ ಓಡಿ ವಿಶ್ವವಿಖ್ಯಾತಿಯನ್ನು ಸಂಪಾದಿಸಿದ ಬ್ರಿಟನಿನ ರೋಜರ್ ಬ್ಯಾನಿಸ್ಟರ್ ಈ ವಿಕ್ರಮವನ್ನು ಸಾಧಿಸಿದ್ದು ಕೆನಡದ ವಾಂಕೂವರ್ನಲ್ಲಿ ನಡೆದ 5ನೆಯ ಕೂಟದಲ್ಲಿ. ಇದು ಕೆನಡದಲ್ಲಿ ಸೇರಿದ ಎರಡನೆಯ ಕೂಟ.

 ಕಾಮನ್‍ವೆಲ್ತ್ ಕ್ರೀಡೆಯಲ್ಲಿ ಭಾರತದ ವಿಜಯಪತಾಕೆಯನ್ನು ಹಾರಿಸಿದ ಖ್ಯಾತಿ ಮಿಂಚಿನ ಓಟದ ಮಿಲ್ಖಾಸಿಂಗನದು. 1958ರಲ್ಲಿ ವೇಲ್ಸಿನ ಕಾರ್ಡಿಫ್‍ನಲ್ಲಿ ನಡೆದ ಆರನೆಯ ಕೂಟದಲ್ಲಿ ಮಿಲ್ಖಾಸಿಂಗ್ 440 ಗಜಗಳ ಓಟದಲ್ಲಿ ಸ್ವರ್ಣಪದಕ ಗಳಿಸಿದ. ಕುಸ್ತಿಪಟು ಲೀಲಾರಾಂ ಭಾರದ ತೂಕದ (ಹೆವಿ ವೇಟ್) ತಂಡದ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡನೆಯ ಸ್ವರ್ಣಪದಕವನ್ನು ಗಳಿಸಿಕೊಟ್ಟ ಸ್ಪರ್ಧಿ.

 1962ರಲ್ಲಿ ಆಸ್ಟ್ರೇಲಿಯದ ಪರ್ತ್‍ನಲ್ಲಿ ನಡೆದ ಏಳನೆಯ ಕ್ರೀಡಾಕೂಟದಲ್ಲಿ ಭಾಗ ವಹಿಸಿದ ಭಾರತೀಯ ಅಥ್ಲೆಟಿಕ್ ತಂಡಕ್ಕೆ ಮೈಸೂರಿನ ಹೆಮ್ಮೆಯ ಓಟಗಾರ ಕೆನೆತ್ ಪೊವೆಲ್ ನಾಯಕ. ಬ್ರಿಟಿಷ್ ಚಕ್ರಾಧಿಪತ್ಯ ಮತ್ತು ಕಾಮನ್‍ವೆಲ್ತ್ ಕ್ರೀಡೆಗಳು ಎಂದಿದ್ದ ಹೆಸರನ್ನು ಕೇವಲ ಕಾಮನ್‍ವೆಲ್ತ್ ಕ್ರೀಡೆಗಳು ಎಂದು ಬದಲಾಯಿಸಿದ್ದು ಈ ಕೂಟದ ಸಮಯದಲ್ಲಿಯೇ. ಈ ಕೂಟದಲ್ಲಿ ಭಾರತದ ಕುಸ್ತಿಪಟುಗಳು ಮೂರು ಚಿನ್ನದ, ಮೂರು ಬೆಳ್ಳಿಯ ಮತ್ತು ಮೂರು ಕಂಚಿನ ಪದಕಗಳನ್ನು ಸಂಪಾದಿಸಿ, ಭಾರತದ ಹಿರಿಮೆಯನ್ನು ಎತ್ತಿ ಸಾರಿದರು. ಹ್ಯಾಮರ್ ಎಸೆತದಲ್ಲಿ ಪ್ರವೀಣ್‍ಕುಮಾರ್‍ಗೆ ಬೆಳ್ಳಿಯ ಪದಕ ದೊರಕಿತು.

 1970ರಲ್ಲಿ ಸ್ಕಾಟ್ಲೆಂಡಿನ ಎಡಿನ್‍ಬರೋದಲ್ಲಿ ನಡೆದ ಕ್ರೀಡಾಕೂಟ ಆ ವರೆಗೆ ನಡೆದ ಎಲ್ಲ ಕ್ರೀಡಾಕೂಟಗಳಿಗಿಂತಲೂ ಹೆಚ್ಚು ಯಶಸ್ವಿಯಾಗಿ ನಡೆಯಿತು. ಭಾರತದ ಕುಸ್ತಿ ತಂಡದವರು ಎಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚಿನ ಸ್ವರ್ಣಪದಕಗಳನ್ನು ಗಳಿಸಿದರು. ತಂಡದಲ್ಲಿ ಭಾಗವಹಿಸುವಂಥ ಯಾವ ಸ್ಪರ್ಧೆಯೂ ಇಲ್ಲದ್ದು ಮತ್ತು ಎಲ್ಲ ಸ್ಪರ್ಧೆಗಳೂ ವೈಯಕ್ತಿಕವಾಗಿರುವುದು ಕಾಮನ್‍ವೆಲ್ತ್ ಕ್ರೀಡೆಗಳ ವೈಶಿಷ್ಟ್ಯ.             

   (ಎ.ಆರ್.ಸಿ.ಪಿ.)